ಆಲ್ವಾರ್‌ ಅತ್ಯಾಚಾರ ವಿಚಾರದಲ್ಲಿ ಪ್ರಶಸ್ತಿ ವಾಪಾಸ್ ಮಾಡುವ ಗ್ಯಾಂಗ್ ಯಾಕೆ ಮೌನವಾಗಿದೆ ಎಂದ ಮೋದಿ

ಉತ್ತರ ಪ್ರದೇಶದ ಘಾಜಿಪುರದಲ್ಲಿ ಶನಿವಾರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಅವರು ಪ್ರಶಸ್ತಿ ವಾಪಸ್ ಮಾಡುವ ಬುದ್ಧಿಜೀವಿಗಳಿಗೆ ಟಾಂಗ್ ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದ ದಲಿತ ಮಹಿಳೆಯ ಅತ್ಯಾಚಾರ ವಿಚಾರವನ್ನು ಪ್ರಸ್ತಾಪಿಸಿ ಪ್ರಶಸ್ತಿ ವಾಪಾಸ್ ಮಾಡುವ ಗ್ಯಾಂಗ್ ಈಗೇಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ. ‘ಆಲ್ವಾರ್‌ನಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪಾಲ್ಗೊಂಡ ದುಷ್ಟರನ್ನು ಹಿಡಿದು ದಂಡಿಸುವ ಬದಲು ಕಾಂಗ್ರೆಸ್‌ ಸರಕಾರ, ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ನಡೆದ ಚುನಾವಣೆ. ಈ ಘಟನೆಯಲ್ಲಿ ಸಂತ್ರಸ್ತರಿಗೆ ನ್ಯಾಯದಾನ ವಿಳಂಬವಾಗಿದೆ. ಇದುವೇ ಕಾಂಗ್ರೆಸ್‌ನ ನ್ಯಾಯದಾನದ ಪರಿ ಹೌದು,” ಎಂದು ಜರಿದ ಪ್ರಧಾನಿ, ಪ್ರಕರಣವನ್ನು ಮುಚ್ಚಿ ಹಾಕಲು ಅಲ್ಲಿನ ಕಾಂಗ್ರೆಸ್‌ ಸರಕಾರ ಪ್ರಯತ್ನಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು. ತಮ್ಮ ಆಡಳಿತಾವಧಿಯಲ್ಲಿ ನಡೆದ ಸಣ್ಣಪುಟ್ಟ ಘಟನೆಗಳನ್ನೇ ದೊಡ್ಡದು ಮಾಡಿ ಬುದ್ಧಿಜೀವಿಗಳು ಅವಾರ್ಡ್‌ ವಾಪ್ಸಿ (ಪ್ರಶಸ್ತಿ ವಾಪಸ್‌) ಆಂದೋಲನ ನಡೆಸಿದ್ದನ್ನು ಸ್ಮರಿಸಿಕೊಂಡರಲ್ಲದೇ, ಆಲ್ವಾರ್‌ ಪ್ರಕರಣದ ಕುರಿತು ಮೌನ ವಹಿಸಿರುವ ನಡೆಯನ್ನೂ ಪ್ರಶ್ನಿಸಿದರು.

Leave a Reply